ಮತಾಂತರ ಅಂತ ಹೊಯ್ಕಳ್ಳಿಕತ್ತಾರೆ ಪೇಜಾವರ

ಬಿಜೆಪಿನಾ ಮಾಯಾವತಿ ಬುಟ್ಟು ಖುರಾನಾ ಕೈಬಿಟ್ಟ ಅಡ್ವಾಣಿ ಮೇಲೆ ಆರೋಪ ಬಿದ್ಕಂಡು ಬಂದ್ರೂ ಬಾಯಿ ಬಿಡದೆ ಮೌನವಾಗಿದ್ದ ಯತಿವರ್ಯ ಪೇಜಾವರ ತಿರುಪತಿನಾಗೆ ಕ್ರೈಸ್ತೀಕರಣವಾಗಲಿಕ್ಕತ್ತದೆ ಅಂತ ಹುಯಿಲೆಬ್ಬಿಸ್ಯಾರೆ. ಅವರಾನ ಏಟು ದಿನಾಂತ ಪಬ್ಲಿಸಿಟಿ ಇಲ್ದಂಗೆ ಇದ್ದಾರು. ತಿರುಪತಿ ತಿಮ್ಮಪ್ಪನಿಗಿಂತ ಆತನ ಲಡ್ಡು ಫೇಮಸ್ಸು. ಲಡ್ಡು ಪ್ರಿಪೇರ್ ಮಾಡಾಕೆ ಈಗ ಕಿರಿಸ್ತಾನ್ರಿಗೆ ಕಂಟ್ರಾಕ್ಟ್ ಕೊಟ್ಟಾರಂತೆ ಹೀಗಾಗಿ ಲಡ್ಡು ಮೇಲೆ ಅಗ್ಲಿ ಲವ್ವು ಮಡಿಕ್ಕಂಡಿದ್ದ ಪೇಜಾವರ ಮಡಿ ಕೆಟ್ಟು ಹೋತದಂತ ಲಡ್ಡು ತಿಂದೆ ಅಗ್ದು ರಾಂಗ್ ಆಗವ್ರೆ. ತಿರುಪತಿಗೋಗೋನೆಲ್ಲಾ ಹಿಡಿದು ಅವರ ಕೊಳ್ಳಿಗೆ ಕ್ರಾಸ್ ಹಾಕ್ಲಿಕತ್ತಾರಂತೆ ಕಿರಿಸ್ತಾನ್ರು. ಸಾಮಿ ದರುಸನಕ್ಕೆ ‘ಕ್ಯೂ’ ನಿಂತೋರೆಲ್ಲಾ ಬೈಬಲ್ ಬುಕ್ ಹಂಚ್ತಾವರಂತೆ. ದೇವಸ್ಥಾನ್ದಾಗೆ ಮಂತ್ರ ಪಠಣ ಮಾಡೋ ಬದ್ಲು ದೇವವಾಕ್ಯ ಓದೋ ಪೂಜಾರ್ರು ಹೋಲಿ ತೀರ್ಥ ಕೊಡಲಿಕತ್ತಾರೆ. ಇದ್ನೆಲ್ಲಾ ಹಿಂಗೆ ಬುಟ್ರೆ ನಾಳೆ ತಿಮ್ಮಪ್ಪನ ಹಣೆ ಮ್ಯಾಗಿರೋ ಮೂರುನಾಮ ಮಾಯವಾಗಿ ಕ್ರಾಸೇ ಹಣಿ ಮ್ಯಾಗೆ ಪ್ಲೇಸ್ ಪಡದ್ರೆ ನಾನು ನೇಣು ಆಯ್ಕತೀನಿ ಅಂತ ನಿಡುಸುಯ್ತು. ಅದಕ್ಕೂ ಮುಂಚೆ ಭಕ್ತಾಧಿಗಳ್ನ ಸೇಸಿ ಸ್ಟ್ರೈಕ್ ಮಾಡ್ತೀನಿ. ತಿರುಪತಿನಾಗೆ ಈಗೀಗ ಮುಸಲ್ಮಾನ್ರು ಕಿರಿಸ್ತಾನ್ರೇ ಬಾಳೋಟು ಮಂದಿ ಅಧಿಕಾರದಾಗವ್ರಂತೆ. ನನ್ನ ಸತ್ಯ ಸೋದ್ನಾ ಸಮಿತಿ ರಿಪೋಲ್ಟ್ ಕೊಟ್ಟಿದೆ. ನಾಹೆಂಗೆ ಸುಮ್ಕೆ ಕೂರ್ಲಿ ಹಿಂದೂಗಳಿಗೆ ಇದಕ್ಕಿಂತ್ಲೂ ಅಪಮಾನ ಏನಾಗ್ಬೇಕ್ರಿ ಅಂತ ಅಳಲಿಕತ್ತಾರೆ ಪೇಜಾವರ. ಹಿಂದೂಗಳ ಕಂಟ್ರಾಟು ಹಿಡಿದಿರೋ ಪ್ರವೀಣ್ ತೊಗಾಲಾಡಿಯಾ ಹಿಂದೂ ಗುಡಿಯಾಗೆ ಕ್ರಿಸ್ತರು ಲಡ್ಡು ಮಾಡೋದು ಅದನ್ನ ನಾವು ತಿಂದೋ ಅಂದ್ಮೇಲೆ ಮತಾಂತರ ಆದಂಗೆಯಾ. ಆಂಧ್ರದ ಸರ್ಕಾರನಾ ಅಲ್ಲಾಡ್ಸಿ ಬಿಡ್ತೀನಿ ಅಂತ ಭರತನಾಟ್ಯ ಶುರು ಹಚ್ಕಂಡಾನ್ರಿ. ಇಷ್ಟ ಬಂದ ಧರ್ಮಕ್ಕೆ ಸೇರ್ಬೋದು ಪ್ರಚಾರ ಮಾಡ್ಬೋಡು ಅಂತ ಸಂವಿಧಾನ್ದಾಗೆ ಇರೋವಾಗ ಇವರ್ಯಾಕೆ ಹಿಂಗೆ ಹುಚ್ಚು ಮುಳ್ಳರಂಗೆ ಆಡ್ಲಿಕತ್ಯಾವೆ? ಮತಾಂತರ ನಮ್ಮ ದೇಸಕ್ಕೇನು ಹೊಸದೇನ್ರಿ? ಮುಸ್ಲಿಮರು ಕೈಸ್ತರು ಬರೋಕ ಮೊದ್ಲೆ ಮತಾಂತರ ಅವಾಂತರ ನಡೆದ್ಯೆತ್ರಿ. ಜನಗಳನ್ನು ದನಕ್ಕಿಂತ ಕೀಳಾಗಿ ಕಂಡು
ದನಗಳನ್ನೇ ದೇವರಂತ ಪೂಜೆ ಮಾಡ್ತಾ ಮನುಷ್ಯನ ಟಚ್ ಕೂಡ ಮಾಡ್ಡೆ. ಬೇಧಭಾವ ತೋತಾ ಜಾತಿ ಬೀಜ ಬಿತ್ತಿದ, ಹಿಂದೂ ಧರ್ಮದಾಗೆ ಆಚಾರದ ಹೆಸರಿನಾಗೆ ನಡೆಯೋ ಅಪಚಾರ, ಅಮಾನವೀಯತೆ ಖಂಡಿಸಿ ಎರಡು ಸಾವಿರ ವರ್ಷಗಳ ಹಿಂದೇನೇ ಬಂಡೆದ್ದು ವೈದಿಕ ಧರ್ಮನಾ ಇರೋಧಿಸಿ ಇತರೆ ಧರ್ಮಗಳು ಈ ನೆಲದಾಗೆ ಹುಟ್ಕಂಡಿದ್ದು ಮತಾಂತರ ಅಲ್ವೇನ್ರಿ ಪೇಜಾವರ? ಹಿಂದೂ ಧರ್ಮ ಅಂದ್ರೆ ವೈದಿಕ ಧರ್ಮ ಅಂತ್ಲೆ ಜಗಜ್ಜಾಹಿರಾಗೈತೆ. ವಿದ್ಯೆ ಕಲವತರ್ದೇ ಸೊತ್ತಾಗಿ ಮಂದಿ ವಿದ್ಯಾಹೀನರಾಗಿ ಹಿಂದುಳಿಯಲು, ಮನುಷ್ಯರನ್ನು ಅಸ್ಪೃಶ್ಯರನ್ನಾಗಿ ಮಾಡಲು ಕಾರಣವಾದದ್ದೂ ಒಂದು ಧರ್ಮವೆ? ಹಿಂದೂ ಧರ್ಮದ ಯಜ್ಞಯಾಗ ಪ್ರಾಣಬಲಿ ಖಂಡಿಸಿ ಅಹಿಂಸೆಯೇ ಧರ್ಮ ಅಂತ ಮಿಂಚ ಹತ್ತಿಧಾಗ ಶಂಕರಾಚಾರ್ಯ ಮಾಡಿದ್ದೇನು? ಭೌದ್ಧ ಧರ್ಮದ ಬಗ್ಗೆ ಅಪಪ್ರಚಾರ, ಹಲ್ಲೆ, ಬೌದ್ಧ ಧರ್ಮ ಓಡಿಸಿದ ಕುಖ್ಯಾತಿ ಈವಯ್ಯಂಗೆ ಸೇರಬೇಕು. ಆಮೇಲೆ ಜೈನ ಧರ್ಮ ಬಂತು ವಿದ್ಯೆಗೆ ಸರ್ವರಿಗೂ ಅನುಕೂಲ ಕಲ್ಪಿಸಿತು. ಸಂಸ್ಕೃತ ಮೂಲೆಗೆ ತಳ್ಳಿ ಕನ್ನಡತನವನ್ನು ಮೆರೆಯಿತು. ನಂತರ ಬಂದದ್ದು ಚಾರ್ವಾಕ ಧರ್ಮ. ತದನಂತರ ವೀರಶೈವ ಧರ್ಮ ಬಂತು. ವೈದಿಕರ ಮೇಲೆ ಜಂಗಿ ಕುಸ್ತಿಗೆ ಬಿತ್ತು. ಸರ್ವ ಸಮಾನತೆ ಸರ್ವರಿಗೂ ಶಿಕ್ಷಣ ಗೊಡ್ಡು ಆಚರಣೆಗಳ ನಾಶ ಸ್ತ್ರೀ ಸ್ವಾತಂತ್ರ್ಯ ಸರ್ವರ ಲೇಸನ್ನೇ ಬಯಸಿದ್ದರಿಂದ ಅನೇಕರು ವೀರಶೈವ ಧರ್ಮನಾ ಒಪ್ಕೊಂಡ್ರು. ಇತರರು ಜೈನ, ಬೌದ್ಧ ಮತಾವಲಂಬಿಗಳೂ ಆದ್ರಪಾ. ಇದೆಲ್ಲಾ ಮತಾಂತರವಲ್ದೆ ಮತ್ತೇನ್ರಿ? ಆಮೇಲೆ ಇಂತಹ ಶ್ರೇಷ್ಠ ಧರ್ಮಗಳನ್ನೆ ಜಾತಿಗಳನ್ನಾಗಿ ಮಾಡಿಕೊಂಡ ಪಾಪಿಗಳು ನಾವು. ಕ್ರಿಶ್ಚಿಯನ್ನರು ನಮ್ಮ ದೇಶಕ್ಕಾಗಿ ಬಹಳಷ್ಟು ಮಾಡವ್ರೆ ಕಣ್ರಿ. ಮುದ್ರಣ ತಂದರು. ಗ್ರಾಮೀಣ ಪ್ರದೇಶದಾಗೆಲ್ಲಾ ಶಾಲೆಗಳನ್ನು ಮಾಡಿದರು. ಮೈದಡವಿದರು. ಮಾತಾಡಿಸಿ ಕಣ್ಣೀರು ತೊಡೆದರು. ಅವರ ಅಗತ್ಯಗಳನ್ನು ಪೂರೈಸಿ ನೆಲ ಜಲ ಔಷಧ ಆಹಾರ ಒದಗಿಸಿದರು. ಮುಖ್ಯವಾಗಿ ಅದುವರೆಗೂ ಸಿಗದಿದ್ದ ಪ್ರೀತಿಯನ್ನು ಕೊಟ್ಟರು. ಕ್ರೈಸ್ತರ ವಾತ್ಸಲ್ಯಕ್ಕೆ ಕರಗಿದವು ಮತಾಂತರಕ್ಕೊಳಗಾದ್ವು. ಈಗಂತು ಯಾರನ್ನು ಯಾರು ಬಲವಂತವಾಗಿ ಮತಾಂತರಿಸಲು ಅಸಾಧ್ಯ. ಎಲ್ಲರೂ ಸಾಕಷ್ಟು ಬುದ್ಧಿವಂತರಾಗಿದ್ದಾರೆ. ವಿದ್ವಾಂಸ ಮಹಾ ಮೇಧಾವಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅಂತವರೇ ಬೌದ್ಧ ಧರ್ಮಕ್ಕೆ ಮತಾಂತರಗೊಂಡರೆಂದಾಗ ಹಿಂದೂ ಧರ್ಮದಲ್ಲಿಯೇ ಏನೋ ದೋಷವಿರಬೇಕಲ್ಲೇನ್ರಿ? ಅಪಮಾನಿತರು ಅತಂತ್ರರು ತಮಗೆ ಕ್ಷೇಮವೆನ್ನಿಸಿದತ್ತ ಗೌರವ ಸಿಗುವತ್ತ ಹೋಗೋದನ್ನ
ಪ್ರತಿಭಟಿಸೋದು ಹಂಗಿಸೋದು ತಪ್ಪು ಅನ್ನೋದೇ ಪರಮ ತಪ್ಪು. ಕ್ರೈಸ್ತ ಸನ್ಯಾಸಿನಿಯರ ಮೇಲೆ ಅತ್ಯಾಚಾರ, ಕ್ರೈಸ್ತ ಗುರುಗಳ ಹತ್ಯೆಗಳಿಂದ ಖಂಡಿತ ಮತಾಂತರ ತಡೆಗಟ್ಟಲು ಸಾಧ್ಯವೆಂಬುದು ಕೇವಲ ಕುಹಕವಷ್ಟೆ. ವಿಶ್ವಹಿಂದೂ ಪರಿಷತ್, ಭಜರಂಗದಳ, ಆರೆಸ್ಸೆಸ್‍ನೋರು ಒಂದು ಧರ್ಮ ಪ್ರಚಾರಕ್ಕೆ ಚಡ್ಡಿ ಏರಿಸಿ ಲಟ್ಟ ಹಿಡ್ದು ನಿಂತ್ಕಂಡ್ರೆ ಖುಸಿ. ಬೇರೆಯೋರು ಅದ್ನ ಮಾಡಿದ್ರೆ ಕಸಿವಿಸಿ ಅಂದ್ರ ಹ್ಯಾಂಗ್ರಿ! ಹಿಂದೂ ಧರ್ಮ ಒಂದೇ ಅಲ್ರಿ ಇಲ್ಲಿರೋದು. ಭಾರತ
ವಿವಿಧ ಧರ್ಮಗಳ ಮಿಕ್ಚರ್ ದೇಶ. ಮಸೀದಿ ಕೆಡುವುದರಿಂದ, ಬಾಬಾ ಬುಡನ್ ಗಿರಿ ದಾಂಧಲೆಯಿಂದ ಜನಪ್ರೀತಿ ಗಳಿಸಲು ಸಾಧ್ಯವಾ? ಪೋಪ್ ಜಾನ್ ಪಾಲ್ ಬಂದರೆ ಪ್ರತಿಭಟಿಸೋದು ಬೆನ್ನಿಹಿನ್ ನಂತ ವಂಚಕ ಬಂದರೆ ಇಡೀ ಭಾರತಕ್ಕೇ ಎಲ್ಲಿ ಕ್ರಾಸ್ ತೊಡಿಸಿಬಿಡುತ್ತಾನೋ ಎಂದು ಹಪಹಪಿಸೋದು ಎಂತಕ್ಕೆ ಮಾರಾಯ್ರೆ! ಹಿಂದು ಧರ್ಮ ಅಷ್ಟೊಂದು ಬಲಹೀನವೆ, ದಾರಿತಪ್ಪಿದೆಯೇ? ಅದು ನಡೆದು ಬಂದ ದಾರಿಯಲ್ಲೆ ತಪ್ಪಿದೆಯೆ ಅಂಬೋ ಗುಮಾನಿ ಕಾಡೋಲ್ವೆ? ಅನೇಕಾನೇಕ ಧರ್ಮಗಳು ಒಗ್ಗೂಡಿ ಬಾಳುತ್ತಿರೋ ಭಾರತದಲ್ಲಿ ಒಂದು ಧರ್ಮವೆಂಬೋದು ಮಾತ್ರವೇ ಯಾಕಿಷ್ಟು ಕಾಲಕಾಲಕ್ಕೆ ಅಭದ್ರತೆ ಅಸ್ಥಿರತೆ ಅಧೀರತೆ ಅಸಹಾಯಕತೆ ಅಪ್ರಬುದ್ಧತೆಯಿಂದ ನರಳಿಕತ್ತೇತ್ರಿ? ಬೌದ್ದ ಧರ್ಮ ಜೈನಧರ್ಮ ವೀರಶೈವಧರ್ಮ ಹಿಂದು ಧರ್ಮ ಅಲಿಯಾಸ್ ವೈದಿಕ ಧರ್ಮ ನಮ್ಮಲ್ಲಿವೆ. ಹಾಗಾದರೆ ಇವು ಯಾವುದೇ ಧರ್ಮಕ್ಕೆ ಸೇರದ ನಾವು ಅಂದರೆ ಒಕ್ಕಲಿಗರು, ಕುರುಬರು, ನಾಯಕರು, ರೆಡ್ಡಿಗಳು, ಉಪ್ಪಾರರು, ಮಡಿವಾಳರು, ಪಂಚಮರು ನಾವೆಲ್ಲಾ ಯಾರ್ರಿ? ಹಿಂದೂ ಧರ್ಮವೆಂದರೆ ವೈದಿಕ ಧರ್ಮವೆಂದೇ ವರಲ್ಡ್ ಫೇಮಸ್ ಆಗಿರೋವಾಗ “ಅಸಲು ನಾವು ಹಿಂದುಗಳೆ” ಎಂಬ ಪ್ರಶ್ನೆ ಪ್ರಶ್ನಯಾಗೆ
ಉಳಿತದಲ್ವೆ! ಉಡುಪಿ ಬ್ರಾಹ್ಮಣರ ಹೋಟ್ಲಾಗೂ ಈಗ ಬ್ಯಾರೆ ಜಾತಿ ಕುಕ್ಕುಗಳಿರ್ತಾರ್ರಿ ಪೇಜಾವರರೆ. ಅಡಿಗೆ ರುಚಿ ಮುಖ್ಯ. ಲಡ್ಡು ಯಾರಾನ ಮಾಡವಲ್ರಾಕೆ ಟೇಸ್ಪಂ ಇದ್ರಾತು. ಅಪಮಾನಿಸುವ ಧರ್ಮ ಯಾರಿಗೆ ಬೇಕೇಳ್ರಿ? ಯಾರಿಗೆ ಎಲ್ಲಿ ನಿರುಮ್ಮಳವಾಗಿ ಬದುಕಲು ಸಾಧ್ಯವೋ ಅಲ್ಲಿಗ್ ಹೋಗಿ ಬಿಡ್ರತ್ತಾ. ಅರಿವೇ ಗುರು ಅಂತಾರೆ ನಿಮಗ್ಯಾವಾಗ ಅರಿವು ಬತ್ತದೋ ಶ್ರೀಕೃಷ್ಣನೇ ಬಲ್ಲ.
*****
(ದಿ. ೨೭-೦೭-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀ ಹೂಂ ಎಂದರೆ ಮಾತ್ರ!
Next post ಯುದ್ಧ

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys